ಅಣ್ಣನ ಹಾರೈಕೆ
(ಭಾಮಿನಿ ಷಟ್ಪದಿ)
ಅಳಲು ಬೇಡಾ ತಂಗಿ ನೀನತಿ |
ಬಳಲು ಬೇಡಾ ನಿನ್ನ ಮನದೋಳು |
ಗಳಿಸಲತ್ತೆಯ ಮಮತೆ ಮಾವನ ಸೇವೆ ಮಾಡವ್ವ ||
ಅಳಿಸ ಬೇಡಾ ಕೀರ್ತಿ ಯೆಮ್ಮದು |
ಉಳಿಸಬೇಕು ಮಾನ ಗಂಡನ |
ಗಳಿಸಬೇಕು "ಯಶದ ಸಂಪದ" ನೀನು ನೋಡವ್ವ ||೧||
ಇಂದು ನಿಂತರು ಎಂದಿಗಾದರು ||
ಮುಂದೆ ಹೋಗುವಿ ನಿನ್ನ ಮಂದಿರಕೆಂದು |
ಕೇಳುವೆ ನೀನು ತಪ್ಪದೆ ಹೊಂದಿಕೊಳ್ಳವ್ವ ||
ಚಂದದಿಂದಲಿ ನೀನು ನಡೆಯುತ |
ಕಂದುಗೊರಳನ ಬೇಗನೊಲಿಸುತ |
ಒಂದು ಗೂಡುತ ನಿನ್ನ ಗಂಡನ ಕೂಡ ಬಾಳವ್ವ ||೨||
ಎರಡು ಬಗೆಯ ಬೇಡ ಮನದೊಳು |
ಎರಡು ಮನೆಗಳ ದೀಪ ಬೆಳಗಿಸು |
ಹರಸುವೆನು ನಾ ನಿನಗೆ ಬೇಗದಿಪತಿಯ ಮನೆಯಲ್ಲಿ ||
ಸರಳ ಸಂಸಾರವನು ಮಾಡುತ |
ವರದ ಶಂಕರ ಪೂಜೆ ಗೈಯುತ |
ಮರಳಿ ಮಗುವನು ಪಡೆದು ಬಾರವ್ವ ತವರ ಮನೆಗಾಗಿ ||೩||
ದಿ|| ಶ್ರೀ. ರಾಮಪ್ಪಾ ಸಿ. ಸಜ್ಜನ. ತಾರಿಕು:೨೬-೦೧-೧೯೬೩
-----------------------------------------------
ತಾಯಿಯಿಲ್ಲದ ತವರೂರು
(ಪಾರ್ಧಿಕ ಷಟ್ಪದಿ)
ನೆನೆನೆನೆದು ತವರೊರ ಮನೆ ನೋಡ ನಾ ಬಂದೆ |
ಮನದಲ್ಲಿ ನೆನಪಾಗಿ ಕಣ್ಣೀರು ಕರೆತಂದೆ |
ತನು ನಡುಗಿ ಮನ ನಡುಗಿ ತಾಯಿಯಿಲ್ಲದ ತವರಮನೆಯಿಂದು ನಾ ಕಂಡೆನು ||
ನನ್ನ ತಾಯಿ ಮರೆಯಾಗಿ ಹತ್ತಾರು ವರುಷಂದೆ |
ಕನಸಿನೊಳು ತಾ ಬಂದು ಸಂತೈಸಲೇಳೆಂದೆ |
ಮನತಾಪವೊತ್ತೊತ್ತಿ ಬರುವದಂಪಿಡಿಕೊಂಡು ದುಃಖವಂ ತಡಕೊಂಡೆನು || ೧ ||
ಪಡ ೆದವರು ತಾಯಿತಂದೆಗಳು ಕಡು ಮಮತೆಯಲಿ |
ಸಡಗರದಿ ಸಲುಹಿದರು ಸೌಖ್ಯದಿಂ ಬೆಳಿಸಿದರು |
ಉಡುತೊಡಿಗೆ ತೊಡಿಸಿದರು ವಿದ್ಯೆಯಂ ಕಲಿಸಿದರು ಚಿರಬಾಳ್ವೆ ಬಾಳಲೆಂದು ||
ಪಡೆದವರ ಮನೆ ಮುಂದೆ ಸಾರಣಿಯ ಮಾಡುತ್ತ |
ಬೆದಗಿನೇಳು ತರತರದ ರಂಗವಲ್ಲಿಯನಿದುತ್ತ |
ಅಡಿಗಡಿಗೆ ಪರಿಪರಿಯ ಶಿರಿಸೊಬಗ ಸವಿಯುತ್ತಲಿದ್ದೆ ನಾಂ ಸೌಖ್ಯದಿಂದ || ೨ ||
ಹೆತ್ತವರ ಮನೆಸುಖವ ಹೇಗೆ ಮರೆಯಲಿ ನಾನು |
ಅತ್ತತ್ತು ಮರೆತರೂ ಮರೆಯದು ಬಾಳಿನೊಳು |
ಮತ್ತಾರ ಮನೆ ಮುಂದೆ ದುಃಖವಂ ತೋರಿಸಲಿ ಪೇಳೆನಗೆ ತಾಯಂದಿರೆ ||
ಅತ್ತೆಮಾವರ ಕಾಟ ಸಾಕಾಗಿ ಬಂದಿಹೆನು |
ಕತ್ತೆಯಾ ದುಡಿತದಿಂ ಬೇಸತ್ತು ಬಂದಿಹೆನು |
ಅತ್ತು ಕರೆದರು ನನ್ನ ಸತ್ತ ತಾಯಿಯು ಕರಳು ನಾನೆಂದು ಮರೆಯಲವ್ವ || ೩ ||
ತಾಯಿಯ ಮಾತೊಂದು ಮನದಲ್ಲಿ ಬರುತಿಹುದು |
ಕಾಯಕಷ್ತವ ಮಾಡು ಗಂಡನಾ ಮನೆಯಲ್ಲಿ |
ಮಾಯವಾಗುವದು ಮನದ ದುಗುಡವು ಪತಿಭಕ್ತಿಯಿಂ ಸೇವೆಗೈಯುತಿರಲು ||
ತಾಯಿಯಿಲ್ಲದ ಮಗಳು ತವರ ಮನೆಗೆಂದೆಂದು |
ಹಾಯಬಾರದು ದೇವ, ನಗೆಗೀಡವಾಗುವದು |
ತಾಯಿಯಿದ್ದರೆ ಸುಖವ ಸಂಪತ್ತು ಸಿಗುತಿಹುದು ಜಗದೊಳೀ ಮಾತು ನಿಜವು ||೪||
ಅಣ್ಣನ ಹೆಂಡತಿಯು ಜಗದೊಳಗೆ ಜಡಮತಿಯು |
ಬಣ್ಣದಾ ಮಾತೋದು ಹೇಳುತ್ತ ಅಣ್ಣನಿಗೆ |
ಕಣ್ಣಿಂದ ಸೊನ್ನೆಯಂ ಮಾಡುತ್ತ ನೋಡುತ್ತಲವನ ಮನವ ಕೆಡಿಸಿದಳು ||
ಅಣ್ಣ ಮಾತಾಡದೊಳಗೋಡಿದನು ಮನೆಯಲ್ಲಿ |
ಸಣ್ಣ ಮನದವನಾದ ತನ್ಮನೆಯ ಶಿರಿಯಲ್ಲಿ |
ಮಣ್ಣುಗೂಡಿತವನ ಮೊದಲಿನ ಸುಪ್ರೇಮವದು ನೋಡಿನಾ ದುಃಖಿಯಾದೆ || ೫ ||
ಅತ್ತಿಗೆಯಕೈಗೊಂಬೆ ನಮ್ಮಣ್ಣ ತಾ ನಿಂದು |
ಎತ್ತಿಯಾಡಿಸಿದವನು ತಂಗಿಯಂ ಮರೆತಿಹನು |
ಕತ್ತನ್ನು ಮೇಲೆತ್ತಿ ಸಹನೋಡಲಾರನವನಿಂದು ಕಡುವೈರಿ ಯೆನಗೆ ||
ಇತ್ತೆಡೆಗೆ ಬಾರಮ್ಮ ತಂಗಿಯೆಂದೆನಲಿಲ್ಲ |
ತುತ್ತು ಮಾಡುಣಿಸಿದವನಿಂದು ಮರೆತನು ಬೇಗ |
ಮತ್ತೆ ಬಾರೆನು ನನ್ನ ತವರೂರ ಮನೆಗಾಗಿ ಗಂಡನಾ ಮನೆಯೊಳಿರುವೆ || ೬ ||
ಹುಟ್ಟಿ ಬೆಳೆದೆನ್ನ ಮನದೇವತಿಗೆ ನಾಂ ಕೈಯ |
ಮುಟ್ಟಿ ಶರಣೆಂಬೆ ಮನದೊಳಗಾನರಿತುಕೊಂಡೆ |
ಕೊಟ್ಟಿ ಗಂಡನ ಮನೆಯೆ ಶ್ರೇಷ್ಠವಿಹುದೆಂದು ನಾರಿಯರಿಗಿದು ಸಾರುತಿಹೆನು ||
ಎಷ್ಟು ಕಷ್ಟವು ಬರಲಿ ನನ್ನ ಪಾಲಿನದಿರಲಿ |
ಹುಟ್ಟಿದಾ ತವರೂರ ಮನೆಯ ಶಿರಿಯು ಬೆಳೆಯಲಿ |
ಸಿಟ್ಟಿನಾ ನಮ್ಮಣ್ಣನಿಗೆ ತಂಗಿಯ ನೆನಪಿರಲೆಂದು ಬೇಡುವೆನು ದೇವ || ೭ ||
ಸಜ್ಜನರ ಸವಿಮಾತು ಸರ್ವರಿಗೆ ಸಂತಸವು |
ಸಜ್ಜನರ ಕಾಯಕವು ದೇಶಕ್ಕೆ ಹಿತಕರವು |
ಸಜ್ಜನರ ವರ್ತನವು ಲೊಕದಾ ಮನುಜರಿಗೆ ಸನ್ಮಾರ್ಗ ವಾಗಿರುವದು |
ಸಜ್ಜನರ ಗುರುರಾಮ ಬರೆದಿಹನು ಕೇಳವ್ವ |
ಸಜ್ಜನರ ಸಂದೇಶ ಬೀರವ್ವ ಹಡದವ್ವ |
ಹೆಜ್ಜೆ ಹೆಜ್ಜೆಗೆ ನಿಮಗೆ ನಿಜಸಂತಸವ ಲಭಿಸುವದಿಹಪರ ಲೋಕದೊಳಗೆ || ೮ ||
ದಿ|| ಶ್ರೀ. ರಾಮಪ್ಪಾ ಸಿ. ಸಜ್ಜನ. ತಾರಿಕು: ೨೬-೦೧-೧೯೬೩
ಉದಯವಾಗಲಿ ನಮ್ಮ ನಾಡು
